ಕುಡಿವ ಗೀಳು

ಅತಿಯಾಗಿ ದ್ರಾಕ್ಷಾಮದಿರೆ ಮತ್ತು ಇತರ ಮದ್ಯಗಳ ಸೇವನೆಯ ಅಭ್ಯಾಸವುಳ್ಳವರಿಗೆ ಆಗಾಗ ಉಂಟಾಗುವ ಕುಡಿಯಲೇಬೇಕೆಂಬ ಅತ್ಯಾಸೆ (ಡಿಪ್ಸೊಮೇನಿಯ). ಇದನ್ನು ಕುಡಿತದ ಹುಚ್ಚು ಅಥವಾ ಉನ್ಮತ್ತತೆ ಎಂದೂ ಕರೆಯಬಹುದು. ಇದೊಂದು ರೋಗ. ಅನೇಕ ವರ್ಷಗಳ ಕಾಲ ಅತಿಯಾಗಿ ಮದ್ಯಪಾನ ಮಾಡುವುದರಿಂದ ಇದು ಉಂಟಾಗುವುದು. ಆಗಾಗ ಮರುಕಳಿಸುವ ಈ ಸ್ಥಿತಿಯಲ್ಲಿ ರೋಗಿ ಸ್ವತಃ ಅಥವಾ ಹಿತೈಷಿಗಳು ಎಷ್ಟು ಪ್ರಯತ್ನ ಮಾಡಿದರೂ ಮದ್ಯವನ್ನು ಸೇವಿಸದೆ ಇರಲಾಗುವುದಿಲ್ಲ. ಮನೋದೌರ್ಬಲ್ಯ ಮತ್ತು ವೈಕಲ್ಯವೇ ಈ ಸ್ಥಿತಿಗೆ ಕಾರಣ. ಇದು ಮುಂದುವರಿದಲ್ಲಿ ರೋಗಿ ಮದ್ಯಪಾನವಿಲ್ಲದೆ ಜೀವಿಸುವುದೇ ಅಸಾಧ್ಯವೆಂದು ತಿಳಿದು ಹೆಚ್ಚು ಮದ್ಯಪಾನಕ್ಕೆ ತೊಡಗುತ್ತಾನೆ. ಶರೀರದಲ್ಲಿ ಅದರಲ್ಲೂ ಪಿತ್ತಜನಕಾಂಗ, ಹೃದಯ, ಮಿದುಳು ಮತ್ತು ನರಗಳ ದೌರ್ಬಲ್ಯ ಉಂಟಾಗಿ ಸತ್ತ್ವ ಹೀನತೆ ಕ್ರಮೇಣ ಕಾಣಿಸಿಕೊಳ್ಳುತ್ತದೆ, ದೈಹಿಕ ಮತ್ತು ಮಾನಸಿಕ ಚಿಕಿತ್ಸೆಯಿಂದ ಈ ದೌರ್ಬಲ್ಯವನ್ನು ಕೊನೆಗಾಣಿಸಬಹುದು.      

(ಎ.ಜಿ.ಕೆ.ಆರ್.)

ರೋಗಲಕ್ಷಣಗಳು : ಜೀರ್ಣಾಂಗಗಳ ಮೇಲೂ ನರಮಂಡಲದ ಮೇಲೂ ಕುಡಿತದ ಪರಿಣಾಮಗಳು ಎದ್ದುತೋರುತ್ತವೆ. ಜೀರ್ಣಾಂಗಗಳ ಮೇಲಣ ಪ್ರಭಾವಗಳು ಈ ಕೆಳಗಿನಂತಿವೆ.

1 ಬೆಳಗ್ಗೆ ವಾಕರಿಕೆ ಮತ್ತು ವಾಂತಿಯಾಗುವುದು. 2 ಜಠರದ ಉರಿತದಿಂದ ಹೊಟ್ಟೆ ಉಬ್ಬರಣೆ, ಮೇಲು ಹೊಟ್ಟೆಯಲ್ಲಿ ಒಂದು ಬಗೆಯ ಬಳಲಿಕೆ, ತೇಗು ಜಠರದ ಹುಣ್ಣಿನ ಚಿಹ್ನೆಗಳು. ವಾಂತಿಯಲ್ಲಿ ರಕ್ತ ಬೀಳುವುದು. 3 ಜಠರದ ಹುಣ್ಣು. 4 ಪಿತ್ತಕೋಶದಲ್ಲಿ ಕೊಬ್ಬಿನ ಶೇಖರಣೆ. 5 ಪಿತ್ತಜನಕಾಂಗದ ಸಿರೋಸಿಸ್. 6 ಮೇದೋಜೀರಕ ಗ್ರಂಥಿಯ ಉರಿತ.

ನರಮಂಡಲದ ಮೇಲಣ ಪ್ರಭಾವ : 1 ಸಾರಾಯಿ ಕುಡಿದಾಗ ಮತ್ತೇರಿ ಶರೀರದ ಮೇಲೆ ಹತೋಟಿ ತಪ್ಪುವಿಕೆ, ನಡವಳಿಕೆಯಲ್ಲಿ ಏರುಪೇರು, ತೊದಲುನುಡಿ. ಅಸಂಬದ್ದ ಪ್ರಲಾಪ, ಜೋಪು ಹಿಡಿಯುವಿಕೆ, ಮುರ್ಛಾವಸ್ಥೆ ಮುಂತಾದ ಪರಿಣಾಮಗಳು ಕಂಡುಬರುತ್ತದೆ. 2 ಸಾರಾಯಿ ಸೇವನೆಯನ್ನು ನಿಲ್ಲಿಸಿದಾಗ ಒಂದು ಬಗೆಯ ನಡುಕ ಬರುತ್ತದೆ. ಚಿತ್ರವಿಭ್ರಮಣ, ಸನ್ನಿ, ಡಿಲೇರಿಯಮ್ ಟ್ರೆಮನ್ಸ್- ಈ ಮುಂತಾದ ಪರಿಣಾಮಗಳು ಉಂಟಾಗುತ್ತವೆ. 3 ಈ ಜಾಡ್ಯದಿಂದ ಪೋಷಣ ಸತ್ತ್ವಗಳ ಕೊರತೆಯಿಂದ ನರಮಂಡಲದ ಮೇಲೆ ದುಷ್ಟಪರಿಣಾಮಗಳುಂಟಾಗುತ್ತವೆ. ನರಗಳ ಮೇಲಣ ದುಷ್ಪರಿಣಾಮ. ದೃಷ್ಟಿಮಂದಾಗುವಿಕೆ, ಪೆಲಾಗ್ರ ಕಾಯಿಲೆ ಮತ್ತೆ ಕೆಲವು ಕಾಯಿಲೆಗಳು ಈ ಜಾಡ್ಯದಿಂದ ನರಳುವವರಲ್ಲಿ ಕಂಡು ಬರುತ್ತವೆ. ಆದರೆ ಅವುಗಳ ಹುಟ್ಟು ಮತ್ತು ಬೆಳೆವಣಿಗೆಗಳು ಖಚಿತವಾಗಿ ಗೊತ್ತಿಲ್ಲ.

ಮೇಲೆ ಹೇಳಿದ ಎಲ್ಲ ದುಷ್ಪರಿಣಾಮಗಳಿಗೂ ತಕ್ಕ ಚಿಕಿತ್ಸಾಕ್ರಮಗಳುಂಟು. ಆದರೆ ಇವೆಲ್ಲಕ್ಕೂ ಮೂಲವಾದ ಕುಡಿವ ಗೀಳನ್ನು ತಪ್ಪಿಸುವುದು ತುಂಬ ಕಷ್ಟ ಸಾಧ್ಯ. ಅದು ಆಯಾ ವ್ಯಕ್ತಿಯ ಮಾನಸಿಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಕೆಲವು ವೇಳೆ ವ್ಯಕ್ತಿ ತನ್ನ ಸ್ವಂತ ಇಚ್ಛೆಯಿಂದ ಅದನ್ನು ಬಿಟ್ಟುಬಿಡಲು ಶಕ್ತನಾಗಬಹುದು. ಆದರೆ ಕೆಲವರಲ್ಲಿ ತಾವು ಆ ಗೀಳಿನಿಂದ ಮುಕ್ತರಾಗಬೇಕೆಂಬ ಆಸೆಯಿದ್ದರೂ ಅದರಿಂದ ಪಾರಾಗುವ ಸಾಮಥ್ರ್ಯ ಅವರಲ್ಲಿರುವುದಿಲ್ಲ. ಅಂಥ ವೇಳೆಯಲ್ಲಿ ವೈದ್ಯರು ಮತ್ತು ಮನೋರೋಗತಜ್ಞರು ಅವರ ನೆರವಿಗೆ ಬರುತ್ತಾರೆ. ಸಾಮಾನ್ಯವಾಗಿ ಚಿಕಿತ್ಸಾಕ್ರಮಗಳು ನಾಲ್ಕು ಬಗೆಯಾಗಿವೆ.

1 ವ್ಯಕ್ತಿ ಸಾರಾಯಿಯನ್ನು ಸೇವಿಸುವ ಮುನ್ನ ಎಮಿಟೆನ್ ಅಥವಾ ಅಪೊಮಾರ್ಫಿನ್ ಕೊಡುವುದು. ಇದರಿಂದ ವಾಕರಿಕೆ ಹಾಗೂ ವಾಂತಿಗಳುಂಟಾಗುತ್ತವೆ. ಸಾರಾಯಿ ಸೇವಿಸುವುದರಿಂದ ಈ ಪರಿಣಾಮವುಂಟಾಗುತ್ತದೆಂಬ ಭಾವನೆ ರೋಗಿಯ ಮನಸ್ಸಿಗೆ ಬಂದು ಅವನು ಕ್ರಮೇಣ ಸಾರಾಯಿಯನ್ನು ತ್ಯಜಿಸಲು ಪ್ರಯತ್ನ ಪಡುತ್ತಾನೆ. ಈ ಚಿಕಿತ್ಸೆ ಕೆಲವು ವಿಶೇಷ ಸುಸಜ್ಜಿತ ಸಂಸ್ಥೆಗಳಲ್ಲಿ ಮಾತ್ರ ಸಾಧ್ಯವಾಗುವುದರಿಂದ ಇದು ಅಷ್ಟು ಸಾರ್ವತ್ರಿಕವಾಗಿ ಪ್ರಯೋಗಿಸಲ್ಪಡುವುದಿಲ್ಲ.

2 ಆಂಟಬ್ಯೂಸ್ ಔಷಧದ ಬಳಕೆ : ರೋಗಿಗೆ ಪ್ರತಿದಿನವೂ ಐದು ಗ್ರಾಂ ಆಂಟಬ್ಯೂಸ್‍ನ್ನು ಸೇವಿಸಲು ಕೊಡುವುದು. ಈ ಔಷಧ ದೇಹದಲ್ಲಿದ್ದಾಗ ಸಾರಾಯಿ ಸೇವಿಸಿದರೆ ರಕ್ತದ ಒತ್ತಡ ಕಡಿಮೆಯಾಗಿ ತಲೆಸುತ್ತು, ವಾಕರಿಕೆ ಮತ್ತು ವಾಂತಿಗಳು ಉಂಟಾಗುತ್ತವೆ. ಈ ಪರಿಣಾಮಗಳನ್ನೆಲ್ಲ ರೋಗಿಗೆ ಮೊದಲೇ ಮನವರಿಕೆ ಮಾಡಿಕೊಡುತ್ತಾರೆ. ಇವುಗಳಿಗೆ ಹೆದರಿ ಅವನು ತನ್ನ ಚಟವನ್ನು ಬಿಡುತ್ತಾನೆ.

3 ಮಾನಸಿಕ ಚಿಕಿತ್ಸೆ: ವ್ಯಕ್ತಿ ಕೌಟುಂಬಿಕ ಅಥವಾ ಸಾಮಾಜಿಕ ಜೀವನದಲ್ಲುಂಟಾದ ಅತೃಪ್ತಿ ಅಸಂತೋಷಗಳನ್ನು ಮರೆಯಲು ವ್ಯಕ್ತಿ ಕುಡಿಯುವ ಗೀಳಿಗೆ ಬಲಿಯಾಗಿರುತ್ತಾನಷ್ಟೆ. ಈ ಅತೃಪ್ತಿ ಅಸಂತೋಷಗಳಿಗೆ ಕಾರಣಗಳನ್ನು ಹುಡುಕಿ ಅವನ್ನು ಸರಿಪಡಿಸುವುದರಿಂದ ವ್ಯಕ್ತಿ ಕುಡಿವ ಗೀಳನ್ನು ತ್ಯಜಿಸಬಹುದು. ಇದರ ಜೊತೆಗೆ ಅವನ ದೇಹದ ಆರೋಗ್ಯವನ್ನು ಉತ್ತಮಪಡಿಸುವುದರ ಕಡೆಗೂ ಗಮನ ಕೊಡಬೇಕು.

4 ಕೆಲವು ಸಾಮಾಜಿಕ ಸಂಸ್ಥೆಗಳು ಸಾರಾಯಿ ಗೀಳನ್ನು ತಪ್ಪಿಸಲು ನೆರವಾಗುತ್ತವೆ. ಆ ಸಂಸ್ಥೆಗಳಲ್ಲಿ ಒಮ್ಮೆ ಈ ಗೀಳಿನಿಂದ ನರಳಿ ಮುಕ್ತರಾದ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಅವರಿಗೆ ಅದರ ಸಕಲ ದುಷ್ಟರಿಣಾಮಗಳ ಅರಿವೂ ಚೆನ್ನಾಗಿರುತ್ತದೆ. ಅಂಥ ಜನರೊಡನೆ ಸೇರುವುದರಿಂದ ವ್ಯಕ್ತಿ ತನ್ನ ಗೀಳನ್ನು ಬಿಟ್ಟುಬಿಡಲು ಮನಸ್ಸು ಮಾಡಬಹುದು.    

 (ಜೆ.ಇ.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ